*ಸೀತಾ ನದಿಯ ಮಡಿಲಲ್ಲಿ ಕಂಗೊಳಿಸುವ ಶಕ್ತಿ ಸ್ವರೂಪಿಣಿ
- ಶ್ರೀ ಕ್ಷೇತ್ರ ಬೆಣ್ಣೆಕುದ್ರು ಬಾರ್ಕೂರು ಶ್ರೀ ಕುಲ ಮಹಾಸ್ತ್ರೀ* ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ
ಇದೇ ಬರುವ ದಿನಾಂಕ 15-12-2024 ರವಿವಾರ ಧನು ಸಂಕ್ರಮಣದ ಗೆಂಡ ಸೇವೆಯಿಂದ ಮೊದಲ್ಗೊಂಡು ದಿನಾಂಕ 19-12-2024 ಗುರುವಾರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಬನ್ನಿ ಶ್ರೀ ಕ್ಷೇತ್ರ ಬೆಣ್ಣೆಕುದ್ರಿ ಗೆ
ಶ್ರೀ ದೇವರ ಕೃಪೆಗೆ ಪಾತ್ರರಾಗಿ🙏🙏🙏🙏🙏🙏🙏🙏
ಇತಿಹಾಸ ಪ್ರಸಿದ್ಧ ಬಾರ್ಕೂರಿನ ಕಲ್ಲು ಚಪ್ಪರದ ಪಶ್ಚಿಮ ದಿಕ್ಕಿಗೆ ಸುಮಾರು ಒಂದೂವರೆ ಕಿಲೋ ಮೀಟರು ದೂರದಲ್ಲಿ ಸುತ್ತಲೂ ಜಲಾವೃತಗೊಂಡಿರುವ ಪುಟ್ಟ ದ್ವೀಪವೇ ಬೆಣ್ಣೆಕುದ್ರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಮೊಗವೀರ ಕುಲಬಾಂದವರು ನಂಬಿ ಆರಾಧಿಸಿಕೊಂಡು ಬಂದಿರುವ ಮೂಲ ಸಂಸ್ಥಾನವೇ ಈ ಪುಟ್ಟ ದ್ವೀಪದಲ್ಲಿ ನೆಲೆನಿಂತ ಶ್ರೀಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನ. ಸರಿ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವು ಒಂಭತ್ತು ತಲೆಮಾರಿನ ಶ್ರೇಷ್ಟವಾದ ಭವ್ಯ ಗುರು ಪರಂಪರೆಯ ನೆಲೆಯಾಗಿತ್ತು.
ಹತ್ತು ಹಲವು ಮಂದಿ ಭಕ್ತರು ಒಟ್ಟಿಗೆ ಸೇರಿ ಸಾಮೂಹಿಕ ನೆಲೆಯಲ್ಲಿ ಸಮುದಾಯದ ಒಳಿತಿಗೆ ಮಾಡುವ ಸಾಮೂಹಿಕ ಪ್ರಾರ್ಥನೆಗೆ ಈ ಕ್ಷೇತ್ರದಲ್ಲಿ ವಿಶೇಷ ಪ್ರಾಶಸ್ತ್ಯವಿದೆ
*#ಸ್ಥಳ #ಪುರಾಣ : *ವಿಜಯನಗರದ ಅರಸರ ಕಾಲಕ್ಕಿಂತಲೂ ಪೂರ್ವದಲ್ಲಿ ಬೆಣ್ಣೆಕುದ್ರು, ಬಾರ್ಕೂರು ಸಂಸ್ಥಾನದ ಸೇವಾ ಠಾಣೆಯಗಿತ್ತು. ಅಂತೆಯೇ ಸೇನಾಪತಿಗಳು ಆರಾಧಿಸಿಕೊಂಡು ಬರುತ್ತಿದ್ದ ವೀರಭದ್ರ ದೇವಸ್ಥಾನವೂ ಮೂಲದಲ್ಲಿತ್ತು ಎನ್ನುವ ಮಾಹಿತಿ ಸ್ಥಳ ಪುರಾಣದಿಂದ* ತಿಳಿದುಬರುತ್ತದೆ. ಉತ್ತರದಿಕ್ಕಿನಿಂದ ಆಗಮಿಸಿದ ಮೊಗವೀರ ಸಮಾಜದ ತಪಸ್ವಿನಿ ಮಹಿಳೆಯೋರ್ವಳು ತನ್ನ ದಿವ್ಯ ಶಕ್ತಿಯಿಂದ ಜನ ಸಾಮಾನ್ಯರ ನೋವು ದು:ಖಗಳನ್ನು ಸಂತೈಸುತ್ತಾ ಜನಪ್ರಿಯಳಾದಳು
ಮುಖ್ಯವಾಗಿ ಸೇನಾಧಿಪತಿಯು ಯಾವುದೋ ಗಂಡಾಂತರದಲ್ಲಿ ಸಿಲುಕಿಕೊಂಡಾಗ ತನ್ನ ಪವಾಡದಿಂದ ಅವನನ್ನು ಪಾರುಮಾಡಿ ರಾಜಮರ್ಯಾದೆಗೆ ಪಾತ್ರಳಾದಳು ಎನ್ನುವುದು ಪ್ರತೀತಿ. ಆ ತಪಸ್ವಿನಿಯ ಸಹೋದರ ಗುರು ದಂಪತಿಗಳು ತಮ್ಮ ತಪೋಃಶಕ್ತಿಯಿಂದ ಸಿದ್ಧಿಸಿದ ಶ್ರೀದೇವಿಯ ಅನುಗೃಹದೊಂದಿಗೆ ಇಲ್ಲಿಗೆ ಆಗಮಿಸಿದಾಗ ಅವರುಗಳಿಗೂ ರಾಜ ರಾಜಮರ್ಯಾದೆಯ ಸ್ವಾಗತ ಲಭಿಸಿತು. ಈ ಗುರುದಂಪತಿಗಳು ತಪಸ್ವಿನಿಯೊಂದಿಗೆ ನೆಲೆನಿಂತ ಮೂಲ ಮನೆಯೇ ಗುರುಮಠ. ತದನಂತರದಲ್ಲಿ ಸೇನಾಧಿಪತಿ ಹಾಗೂ ಕರಾವಳಿಯ ಮೊಗವೀರರ ಬೇಡಿಕೆಯಂತೆ ಗುರುದಂಪತಿಗಳು ಸ್ವತಃ ಶ್ರೀ ವೀರಭದ್ರ ದೇವರ ಸನಿಹದ ಪೀಠದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಷ್ಠಾಪಿಸಿದ ದೇವಿಯೇ ಪಂಚಾಂಶಗಳ ಸಂಭೂತೆಯಾದ ಶ್ರೀ ಕುಲಮಹಾಸ್ತ್ರೀ ಅಮ್ಮನವರು ಎನ್ನುವುದು ಪ್ರತೀತಿ. ಆ ತಪಸ್ವಿನಿ ಮಹಿಳೆ ಬೇರಾರು ಆಗಿರದೇ ಈಗ ಪೂಜಿಸಲ್ಪಡುತ್ತಿರುವ ಅಜ್ಜಮ್ಮ ದೇವರು ಎನ್ನುವುದು ಕೆಲವರಿಗೆ ತಿಳಿದಿರಲಿಕ್ಕಿಲ್ಲ
ಅಂದಿನಿಂದ ಈ ದೇವಸ್ಥಾನದಲ್ಲಿ ಶ್ರೀ ಕುಲ ಮಹಾಸ್ತ್ರೀ ಅಮ್ಮನವರನ್ನು ಪ್ರಧಾನ ದೇವಿಯಾಗಿ ಮೊಗವೀರರು ಆರಾಧಿಸಿಕೊಂಡು ಬಂದರೆನ್ನುವುದು ಸ್ಥಳಪುರಾಣದಿಂದ ತಿಳಿದು ಬರುತ್ತದೆ. ಶ್ರೀಕುಲ ಮಹಾಸ್ತ್ರೀ ಅಮ್ಮನವರನ್ನು ಪ್ರತಿಷ್ಠಾಪಿಸಿದ ಗುರುಗಳಾದ ಶ್ರೀ ಮಂಗಳ ಪೂಜಾರ್ಯರು ನಮ್ಮ ಸಮಾಜದ ಕುಲಗುರುಗಳಾಗಿದ್ದು ಶ್ರೇಷ್ಠ ಗುರುಪರಂಪರೆಗೆ ಕಾರಣೀಭೂತರಾದರು. ಅಂದು ಬೆಳಗಿಸಿದ ಶ್ರೀಕುಲಮಹಾಸ್ತ್ರೀ ದೇವಿಯ ಜ್ಯೋತಿಯು ನಂದಾದೀಪವಾಗಿ ಬೆಳಗಬೇಕೆಂದು ಪ್ರತೀ ಗುಡಿಯಿಂದ ವಾರ್ಷಿಕ ದೀಪ ಕಾಣಿಕೆ ಸಂಗ್ರಹಿಸುವ ಪರಿಪಾಠ ಮೂಲಗುರುಗಳ ಕಾಲದಿಂದಲೂ ಬಂದ ಪದ್ಧತಿ ಶ್ರೀಕುಲಮಹಾಸ್ತ್ರೀಯು ಪಂಚ ಶಕ್ತಿಯ ಅಂಶಗಳ ದೈವಸ್ವರೂಪಿಯಾಗಿದ್ದು ಅನ್ನಪೂರ್ಣ, ಭದ್ರಕಾಳಿ, ಮಾರಿಯಮ್ಮ , ದುರ್ಗೆ ಮತ್ತು ಪ್ರತಿಬಿಂಬ ಸ್ವರೂಪಿಣಿಯರ ಸಮಾಗಮವಾಗಿದೆ. ಅಂತೆಯೇ ವೀರಭದ್ರ ದೇವರೂ ಕೂಡಾ ನಾಗ, ಬ್ರಹ್ಮ, ರಕ್ತೇಶ್ವರಿ , ನಂದಿ ಹಾಗೂ ಕ್ಷೇತ್ರಪಾಲರನ್ನೊಳಗೊಂಡ ಪಂಚದೈವಿಕ ಸ್ಥಾನವಾಗಿದ್ದು ಬಹುಕಾರಣಿಕವಾಗಲು ಕಾರಣವಾಗಿರಬಹುದು. ಶ್ರೀಕುಲ ಮಹಾಸ್ತ್ರೀಯನ್ನು ಕುಲಗುರುಗಳೊಂದಿಗೆ ಋಷಿಮುನಿಗಳು ಆರಾಧಿಸಿಕೊಂಡು ಇಲ್ಲಿ ಸಾನಿಧ್ಯಪಡಕೊಂಡ ಕುರುಹು ಇದೆ .ಇಲ್ಲಿರುವ ಪರಿವಾರ ದೈವಗಳು ಶ್ರೀಕುಲ ಮಹಾಸ್ತ್ರೀಯೊಂದಿಗೆ ಪ್ರತಿಷ್ಠಾಪಿಸಲ್ಪಟ್ಟಿವೆ ಎನ್ನುವುದು ತಿಳಿದುಬರುತ್ತದೆ
ಈ ದೇವಸ್ತಾನದಲ್ಲಿನ ಪ್ರತಿಷ್ಠಾ ವಿಧಿಯು ವಿಶಿಷ್ಠ ಪರಂಪರೆಯದಾಗಿದ್ದು ಪೀಠ ಮತ್ತು ಬಿಂಬ ಪ್ರತಿಷ್ಠೆಯನ್ನು ಕಾಣಬಹುದಾಗಿದೆ ವಿಗ್ರಹಾರಾಧನೆ ತೀರಾ ಇತ್ತೀಚಿನ ಬೆಳವಣಿಗೆಯೆಂದು ತಿಳಿದುಬರುತ್ತದೆ. ಈಗ ಇರುವ ವಿಗ್ರಹದ ಹಿಂದಿರುವ ಬೃಹದಾಕಾರದ ಕನ್ನಡಿ ಭಕ್ತನ ಪ್ರತಿಬಿಂಬದಲ್ಲಿ ದೇವಿ ಸ್ವರೂಪವನ್ನು ಕಂಡುಕೊಳ್ಳುವ ವಿಶಿಷ್ಠ ತೆರನಾದ ಭಕ್ತಿಗಾಗಿ. ಗುರುಮಠದಲ್ಲಿ ಕುಲಗುರುಗಳ ಪಟ್ಟದ ದೇವರಾದ ನಂದಿ ಅಥವಾ ಹಾಯ್ಗುಳಿ ಪ್ರಧಾನ ದೇವರಾಗಿದ್ದು, ಗುರುಪತ್ನಿಯ ಪಟ್ಟದ ದೇವರಾದ ನವದುರ್ಗೆ ಪ್ರಧಾನವಾಗಿದ್ದು, ಇಲ್ಲಿಯೂ ದೈನಂದಿನ ಪೂಜಾವಿಧಿ ನಡೆಯುತಿತ್ತು. ಗುರುಪತ್ನಿಯನ್ನು ಸರ್ವೇಶ್ರೀ ಎನ್ನುವ ಗೌರವ ಸಂಭೋದನೆಯಿಂದ ಕರೆಯುತ್ತಿದ್ದರು. ನವರಾತ್ರಿಯ ಕಾಲದಲ್ಲಿ ನವದುರ್ಗೆಗೆ ವಿಶಿಷ್ಠವಾದ ಪೂಜೆ ನಡೆಯುತ್ತಿದ್ದು, ನಮ್ಮ ಸಮಾಜದ ಮಹಿಳೆಯರು ಸರ್ವೇಶ್ರೀ ಅಮ್ಮನವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಗಳಲ್ಲಿ ಶೃದ್ಧಾ ಭಕ್ತಿಯಿಂದ ಭಾಗಿಯಾಗುತ್ತಿದ್ದರು ಶ್ರೀಕುಲಮಹಾಸ್ತ್ರೀಯ ವಾರ್ಷಿಕ ಉತ್ಸವದಲ್ಲಿ ಬಾಳ ಭಂಡಾರ ಗುರುಮಠದಿಂದ ಹೊರಡುವ ಸಂಪ್ರದಾಯ ರೂಢಿಯಲ್ಲಿದ್ದು, ಇಂದಿಗೂ ಅನುಸರಿಸಲಾಗುತ್ತಿದೆ
ವೆಂಕಟರಮಣ ಮೂಲವಿಗ್ರಹ ಬಹಳ ಹಿಂದಿನಿಂದಲೂ ಇದ್ದಿದ್ದು ಗುಡಿ ರಚನೆಯಾಗಿದ್ದು, ಮಾಧವ ಪೂಜಾರ್ಯರ ಹಿಂದಿನ ಗುರುಗಳ ಕಾಲದಲ್ಲಿ ಎನ್ನುವುದು ತಿಳಿದುಬರುತ್ತದೆ
ಮಲಸಾವಿರ ದೈವಗಳ ಸಾನಿಧ್ಯದಲ್ಲಿ ತ್ರಿಶೂಲವಿರುವುದು ಇಲ್ಲಿನ ವಿಶೇಷ. ಹಸಲ ದೈವವು ಪಶ್ಚಿಮ ಕರಾವಳಿಯಿಂದ ಬಂದು ಅಜ್ಜಮ್ಮನವರ ರಕ್ಷಣೆಗೆ ಬೆಂಗಾವಲಾಗಿದ್ದಿದ್ದು ಎನ್ನುವುದು ಪ್ರತೀತಿ. ಎಲ್ಲಾ ವಿಷಯಗಳು ಅಷ್ಠಮಂಗಲ ಪ್ರಶ್ನೆಯಲ್ಲೂ ತಿಳಿದುಬಂದಿರುವುದು ನಮ್ಮ ಪೂರ್ವಜರ ಮಾಹಿತಿಗೆ ಪುಷ್ಠಿ ದೊರಕಿದಂತಾಗಿದೆ
ಬಾರಕೂರು ಸಂಸ್ಥಾನದ ಹೆಚ್ಚಿನೆಲ್ಲಾ ದೇವಸ್ಥಾನಗಳು ಅನ್ಯರ ಆಕ್ರಮಣಗಳಿಗೆ ತುತ್ತಾಗಿ ಮೂಲ ಸ್ವರೂಪ ಕಳೆದು ಕೊಂಡರೂ ಈ ದೇವಸ್ಥಾನವು ಯಾರ ದಾಳಿಗೂ ತುತ್ತಾಗದಿರುವುದು ಒಂದು ವಿಶೇಷವೇ ಸರಿ .ಗುರುಪರಂಪರೆ ಮತ್ತು ಪಟ್ಟಾಭಿಷೇಕ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೇಷ್ಠ ಗುರು ಪರಂಪರೆ ಇರುವ ಏಕೈಕ ದೇವಸ್ಥಾನ ಎನ್ನುವುದು ನಮ್ಮ ಸಮಾಜಕ್ಕೊಂದು ಹೆಮ್ಮೆ. ಗುರುಗಳ ಮಾರ್ಗದರ್ಶಕನದಲ್ಲಿ ದೇವಸ್ಥಾನದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಸಂಘಟಿತರಾಗಿ ಮೊಗವೀರ ಸಮಾಜವು ಅನುಸರಿಸುತ್ತಾ ಬಂದಿದ್ದು, ಸಾಮರಸ್ಯದ ಜೀವನ ಸಾಗಿಸುತ್ತಿದ್ದರು. ಎಲ್ಲಾ ಗುರುಗಳ ಹೆಸರಿನ ಮುಂದೆ ಮೂಲ ಕುಲಗುರುಗಳ ಹೆಸರಾದ ಮಂಗಳ ಪೂಜಾರ್ಯ ಎನ್ನುವ ಗೌರವ ಸಂಭೋದನೆ ಇರುವುದನ್ನು ಕಾಣಬಹುದಾಗಿದೆ
ಮೂಲ ಅರ್ಚಕರನ್ನು ಪೂಜಾರಿ ಎಂತಲೂ ಕರೆಯುತ್ತಿರುವುದು ರೂಢಿ. ಶ್ರೀ ಮಾಧವ ಮಂಗಳ ಪೂಜಾರ್ಯರು ಕೊನೆಯ ಗುರುಗಳಾಗಿದ್ದು ಶ್ರೀ ಭದ್ರ ಮಂಗಳ ಪೂಜಾರ್ಯ, ಶ್ರೀ ಕೃಷ್ಣ ಮಂಗಳ ಪೂಜಾರ್ಯ , ಅಣ್ಣಪ್ಪ ಮಂಗಳ ಪೂಜಾರ್ಯ, ಶ್ರೀ ಅಂತಯ್ಯ ಮಂಗಳ ಪೂಜಾರ್ಯ, ಶ್ರೀ ಅಂಗಯ್ಯ ಮಂಗಳ ಪೂಜಾರ್ಯ ಎನ್ನುವವರ ಹೆಸರುಗಳನ್ನು ಲಿಖಿತ ದಾಖಲೆಯಲ್ಲಿ ಕಾಣಬಹುದಾಗಿದೆ
ಶ್ರೀ ಮಾಧವ ಮಂಗಳ ಪೂಜಾರ್ಯರು 1966 ರಲ್ಲಿ ಮೃತರಾದ ಬಳಿಕ ಮೊಗವೀರ ಕುಲಗುರುಗಳ ಸ್ಥಾನ ಬರಿದಾಗಿ ಉಳಿದಿದೆ
ವೀರಭದ್ರ ದೇವರ ಅನುಗೃಹದೊಂದಿಗೆ ಗೃಹಸ್ಥಾಶ್ರಮ ಪೂರೈಸಿ, ಜೀವನದ ಅನುಭವವಿರುವ ಗುರುಕುಟುಂಬದ ನಿಷ್ಠಾವಂತರೊಬ್ಬರ ಜಾತಕ ಫಲವನ್ನು ಅಭ್ಯಸಿಸಿ ಬಾರ್ಕೂರು, ಮಂಗಳೂರು, ಬಗ್ವಾಡಿ ಹೋಬಳಿಯವರ ಒಪ್ಪಿಗೆಯೊಂದಿಗೆ ಶಾಸ್ತ್ರೋಕ್ತವಾಗಿ ಗುರುಗಳ ಪಟ್ಟಾಭಿಷೇಕ ಆಗುತ್ತಿತ್ತು. ಪಟ್ಟವೇರುವ ಪೂರ್ವದಲ್ಲಿ ಮಾತಾ-ಪಿತೃಗಳ ಉತ್ತರ ಕ್ರಿಯೆಯನ್ನು ಮಾಡಿ, ಅವರ ಬಂಧುಗಳು ಗುರುವನ್ನು ಸಮಾಜಕ್ಕಾಗಿ ಬಿಟ್ಟುಕೊಡುವ ಸಂಪ್ರದಾಯವಿತ್ತು.ಆದರೆ ಅವರ ಕುಟುಂಬದವರು ಗುರುಗಳ ನಿಧನದ ನಂತರ ಸೂತಕ ಆಚರಿಸುತ್ತಿದ್ದರು. ಗುರುಗಳ ಜೀವಿತಾವಧಿಯಲ್ಲಿ ಶಿಷ್ಯರನ್ನು ನೇಮಕಮಾಡಿಕೊಳ್ಳುವ ಪರಿಪಾಠವಿರಲಿಲ್ಲ. ಗುರುಗಳು ಕುಲದೇವಿಯ ಪ್ರಧಾನ ಅರ್ಚಕರಾಗಿದ್ದು ಸಮಾಜದ ಸರ್ವೋತ್ಕೃಷ್ಠ ನಾಯಕರು, ಸಮಾಜದ ಎಲ್ಲಾ ವಿವಾದ ತಕ್ಷೀರುಗಳನ್ನು ನ್ಯಾಯ ತೀರ್ಮಾನ *ಮಾಡುವ ಗುರುತರ ಹೊಣೆಗಾರಿಕೆ ಗುರುಗಳದ್ದಾಗಿತ್ತು. ಗುರುಮಠದಲ್ಲಿ ಜಾತಿಯ ಎಲ್ಲಾ ಬೈಠಕ್ಕುಗಳು ನಡೆಯುತ್ತಿತ್ತು. ದರ್ಬಾರಿನಲ್ಲಿ ಪ್ರಸಾದ ವಿತರಣೆ ನಡೆಯುತ್ತಿತ್ತು. ಗುರುಗಳು ಪ್ರಸಾದ ವಿತರಣೆ ಕಾಲದಲ್ಲಿ ರಾಜರ ಉಡುಗೆ ತೊಡುಗೆಯನ್ನು ಧರಿಸಿಕೊಂಡು ರಾಜಗಾಂಭಿರ್ಯದಿಂದ ಇರುತ್ತಿದ್ದರು. ವರ್ಷಂಪ್ರತಿ ಗುರುಗಳು ಸಂಚಾರಕ್ಕೆ ತೆರಳುತ್ತಿದ್ದು, ಅವರ ಹಿಂತಿರುಗುವಿಕೆಯ ಸಮಯದಲ್ಲಿ ಹೇರಳವಾಗಿ ಮೀನು ಲಭಿಸುತ್ತಿತ್ತು ಎನ್ನುವುದು ಹಿರಿಯರ ಅನುಭವದ ಮಾತು. ಮೀನುಗಾರಿಕೆಯ
ಆರಂಭದ ಮೊದಲು ಗುರುಗಳ ನೇತೃತ್ವದಲ್ಲಿ ಮೀನುಗಾರರ ಗುರಿಕಾರರ, ಹೋಬಳಿ ಗುರಿಕಾರರ ಸಹಭಾಗಿತ್ವದಲ್ಲಿ ಸಾಮೂಹಿಕ ಪಾರ್ಥನೆ ಜರುಗುತ್ತಿತ್ತು. ಇಂದಿಗೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ