ಕಾರ್ಕಳ:
ವಾರ್ಷಿಕ ವಿಶೇಷ ಶಿಬಿರಗಳು ರೆಡ್ ಕ್ರಾಸ್ ಘಟಕಗಳಿಂದಲೂ ಆರಂಭಗೊಳ್ಳಬೇಕು:ಡಾ.ಗಾಯತ್ರಿ
ಶ್ರೀ ಭುವನೇಂದ್ರ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ,ಹಾಗೂ ಕಾಲೇಜಿನ ಐಕ್ಯೂಎಸಿ ಸಹಯೋಗದೊಂದಿಗೆ ಕಾಲೇಜಿನಲ್ಲಿ ಎರಡು ದಿನಗಳ ತರಬೇತಿ ಶಿಬಿರದ ಉದ್ಘಾಟಿನಾ ಸಮಾರಂಭವು ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಯೂತ್ ರೆಡ್ ಕ್ರಾಸ್ ಅಧಿಕಾರಿ, ಡಾ.ಗಾಯತ್ರಿ ಇವರು ಶಿಬಿರವನ್ನು ಉದ್ಘಾಟಿಸಿ,ಯೂತ್ ರೆಡ್ ಕ್ರಾಸ್ ನಲ್ಲಿ ನಡೆಯುವ ಒಳ್ಳೆಯ ಕೆಲಸಗಳಿಗೆ ಸಂಬಂಧ ಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಪಾತ್ರ ಬಹು ದೊಡ್ಡದಿದೆ.ಅದರ ಸಹಕಾರದ ಹಿನ್ನೆಲೆಯಲ್ಲಿ ನಾವು ಇಷ್ಟೆಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ.
ನಾವೆಲ್ಲ ವಿದ್ಯಾರ್ಥಿಗಳು ನಾಯಕರೇ ಅನ್ನುವ ರೀತಿಯಲ್ಲಿ ಕೆಲಸ ಮಾಡಬೇಕು.ಆಗ ನಮ್ಮಲ್ಲೊಂದು ವಿಶೇಷವಾದ ಆತ್ಮವಿಶ್ವಾಸ ಮೂಡುತ್ತದೆ.ಕೇವಲ,ರಕ್ತದಾನ ಮಾಡುವುದು ಮಾತ್ರ ರೆಡ್ ಕ್ರಾಸ್ ನ ಉದ್ದೇಶವಾಗಬಾರದು. ಬೇರೆ ಬೇರೆ ರೀತಿಯ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಈ ಘಟಕಗಳಿಂದಲೂ ಹಮ್ಮಿಕೊಳ್ಳಬೇಕು.ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಘಟಕದ ಮಹತ್ವದ ಕುರಿತು ತಿಳುವಳಿಕೆ ಮೂಡಲು ಸಾಧ್ಯವಿದೆ.ಸ್ಥಳೀಯ ರೆಡ್ ಕ್ರಾಸ್ ಸಂಸ್ಥೆಯೂ ಈ ಕಾರ್ಯಕ್ರಮದ ಜೊತೆ ಸೇರಿರುವುದು ಸಂತಸದ ವಿಚಾರ ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಪಾಲನಾ ಅಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿಯವರು ಮಾತನಾಡಿ,ವಿದ್ಯಾರ್ಥಿಗಳು ತಮ್ಮ ಸುರಕ್ಷತೆಯ ಕುರಿತ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು.ಇಂದು ಅತೀ ಹೆಚ್ಚು ಅಪಘಾತಗಳು ವಿದ್ಯಾರ್ಥಿ ವಲಯದಲ್ಲಿ ನಡೆಯುತ್ತಿವೆ.ಅಪಘಾತಗಳಾದಾಗ ಗಮನಿಸಿ,ಶುಶ್ರೂಷೆ ಮಾಡುವ ಕಡೆಗೆ ಗಮನ ಹರಿಸುವಂತೆ ಆಗಬೇಕು.ವೈದ್ಯಕೀಯ ನೆಲೆಯಲ್ಲಿ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆ ಅಂತಹ ಕೆಲಸಗಳನ್ನೂ ಮಾಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಮಂಜುನಾಥ ಎ ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ಎರಡೂ ದಿನದ ಶಿಬಿರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.ಆ ಮೂಲಕ ನಾವು ಮನುಷ್ಯತ್ವದ ಪಾಠವನ್ನು ಕಲಿಯುವ ,ಸಮಾಜಕ್ಕೆ ನಮ್ಮನ್ನು ದಕ್ಕಿಸಿಕೊಳ್ಳುವಂತೆ ನೋಡಬೇಕಾದದ್ದು ನಮ್ಮದೇ ಜವಾಬ್ದಾರಿಯಾಗಿದೆ.
ಒಳ್ಳೆಯ ಮನಸುಗಳನ್ನು ಸೃಷ್ಠಿ ಮಾಡುವ ಕೆಲಸ ರೆಡ್ ಕ್ರಾಸ್ ನಂತಹ ಸಂಸ್ಥೆ ಗಳಿಂದ ಆಗುವುದು ನಿಜಕ್ಕೂ ಸಾರ್ಥಕತೆ ಎನಿಸುತ್ತದೆ.ಆತ್ಮವಿಶ್ವಾಸವೇ ಬದುಕಿನ ಗಟ್ಟಿಯಾದ ಮೆಟ್ಟಿಲು.ಅದನ್ನು ಹತ್ತುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುವುದು ಅಗತ್ಯವಾಗಿದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಐಕ್ಯೂಎಸಿ ನಿರ್ದೇಶಕರಾದ ಪ್ರೊ.ನಾಗಭೂಷಣ್ , ಶಿಬಿರವನ್ನು ನಡೆಸಿಕೊಡಲಿರುವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶ್ರೀಗೌರಿ, ರೆಡ್ ಕ್ರಾಸ್ ಘಟಕದ ಸಹ ಸಂಯೋಜಕರಾದ ಚೈತ್ರಾ ನಾಯಕ್ ,ಕಾರ್ಯದರ್ಶಿ ಅಮೃತಾ ಸಹಕಾರ್ಯದರ್ಶಿ ಪೂರ್ವಿ ಉಪಸ್ಥಿತರಿದ್ದರು.
ಅಕ್ಷತಾ ಸ್ವಾಗತಿಸಿ,ರೆಡ್ ಕ್ರಾಸ್ ಸಂಯೋಜಕರಾದ ಪ್ರೊ.ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು .ಆರಿನ್ ವಂದಿಸಿ,ಅನನ್ಯಎಂ.ಕಾರ್ಯಕ್ರಮ ನಿರೂಪಿಸಿದರು.