ಸುಮನಸಾ ಕೊಡವೂರು ರಂಗಹಬ್ಬದ ಸಮಾರೋಪ ಸಮಾರಂಭದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ
ಹಾದಿ ತಪ್ಪುವುದನ್ನು ತಪ್ಪಿಸುವ ರಂಗಚಟುವಟಿಕೆ
ಉಡುಪಿ: ಯುವಜನರು ದಾರಿ ತಪ್ಪುವುದನ್ನು, ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಯುವ ಕೆಲಸ ರಂಗಚಟುವಟಿಕೆ, ಸಮಾಜಮುಖಿ ಕಾರ್ಯಗಳಿಂದ ಆಗುತ್ತವೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ತಿಳಿಸಿದರು.
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.
ಸಣ್ಣಪ್ರಾಯದಲ್ಲಿಯೇ ಹಾಡು, ನೃತ್ಯ, ನಾಟಕಗಳಲ್ಲಿ ತೊಡಗಿಸಿಕೊಳ್ಳುವವರು ದಾರಿ ತಪ್ಪುವುದಿಲ್ಲ. ದುರಭ್ಯಾಸಗಳಿಗೆ ಒಳಗಾಗುವುದಿಲ್ಲ. ರಂಗ ಸಂಸ್ಥೆಗಳು ಕಲೆಯನ್ನು ಕಲಿಸುವುದರ ಜೊತೆಗೆ ಜೀವನ ಪಾಠವನ್ನೂ ಹೇಳಿಕೊಡುತ್ತವೆ ಎಂದು ತಿಳಿಸಿದರು.
ಸಮಾನ ಮನಸ್ಕರು ಸೇರಿ ಸಮಾಜಮುಖಿ ಕೆಲಸಗಳಿಗಾಗಿ ಸಂಘಟನೆ ಕಟ್ಟಿದರು. ಅದರ ಜೊತೆಗೆ ಪ್ರತಿಭೆಗಳನ್ನು ಬೆಳಗುವ ಕಾರ್ಯವನ್ನು ಮಾಡತೊಡಗಿದರು. ಎಲ್ಲರಲ್ಲಿ ಹುದುಗಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ ಎಂದರು.
ಯಾವುದೇ ಕಲಾವಿದರು ಸನ್ಮಾನಕ್ಕಾಗಿ ಕಲಾಸೇವೆ ಮಾಡಿದವರಲ್ಲ. ಆದರೆ, ಅವರು ಸಾಧನೆಯನ್ನು ಗುರುತಿಸುವುದು ಸಮಾಜದ ಕರ್ತವ್ಯ. ಅಂಥ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸುಮನಸಾ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.
ಲಯನ್ಸ್ ಉಪ ಗವರ್ನರ್ ಸಪ್ನಾ ಸುರೇಶ್ ಮಾತನಾಡಿ, ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಕ್ಕಿಂತ ದೊಡ್ಡ ಜವಾಬ್ದಾರಿ ಬೆಳೆಸುವುದು. ಅದಕ್ಕೆ ನಿರಂತರ ಪರಿಶ್ರಮ ಅಗತ್ಯ. ಸುಮನಸಾ 23 ವರ್ಷಗಳಿಂದ ಸತತ ಪರಿಶ್ರಮಗಳನ್ನು ಹಾಕುತ್ತಾ ಬೆಳೆಯುತ್ತಾ ಬಂದಿದೆ ಎಂದು ಹೇಳಿದರು.
ಯಕ್ಷಗುರು ಯು. ದುಗ್ಗಪ್ಪ ಸ್ಮರಣಾರ್ಥ ಯಕ್ಷಸುಮ ಪ್ರಶಸ್ತಿಯನ್ನು ಗೋಪು ಕೆ. ಅವರಿಗೆ ಪ್ರದಾನ ಮಾಡಲಾಯಿತು.
ಮಲ್ಪೆ ಕಾರ್ತಿಕ್ ಗ್ರೂಪ್ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ಮಲ್ಪೆ ಉದ್ಯಮಿ ಆನಂದ್ ಪಿ. ಸುವರ್ಣ, ಉದ್ಯಮಿ ಹರೀಶ್ ಶ್ರೀಯಾನ್, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ದೇವದಾಸ್ ಆರ್. ಸುವರ್ಣ, ಪ್ರಭಾಕರ ಪೂಜಾರಿ, ಸುಮನಸಾ ಕೊಡವೂರು ಸಂಸ್ಥೆಯ ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಅಕ್ಷತ್ ಅಮೀನ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿಯ ಪುನಹ ಥಿಯೇಟರ್ ಕಲಾವಿದರಿಂದ ‘ಯೋಗಿ ಮತ್ತು ಭೋಗಿ’ ನಾಟಕ ಪ್ರದರ್ಶನಗೊಂಡಿತು.