🛕🛕🛕🛕🛕🛕🛕🛕🛕🛕🛕
ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪೆರ್ಣಂಕಿಲ
ದಿನಾಂಕ 21-04-2023. ಮುಂಬೈ ಮಾಯಾ ನಗರಿಯಲ್ಲೊಂದು ಅದ್ಭುತ ಕಾರ್ಯಕ್ರಮ. ನಮ್ಮ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾನ್ವಿತ ಅಧ್ಯಕ್ಷರು ಮುಂಬೈಯ ಪ್ರಖ್ಯಾತ ಜ್ಯೋತಿಷ್ಯರೂ ಆಗಿರುವ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಹಾಗೂ ಪೆರ್ಣಂಕಿಲದ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ ನಮ್ಮ ಪೇಜಾವರ ಮಠದ ಪರಮ ಪೂಜ್ಯ ಯತಿಗಳಾಗಿರುವ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಷಷ್ಟ್ಯಬ್ದಿಯ ಗೌರವಾರ್ಥವಾಗಿ ಗುರುವಂದನೆಯ ಮಹಾ ಉತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಗಾಮ್ ದೇವಿ ಶ್ರೀ ಅಂಬಿಕಾ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ, ವಿದ್ಯಾವಿಹಾರ್ ಇದರ ವಠಾರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೇಜಾವರ ಶ್ರೀಗಳನ್ನು ವೇದ ಘೋಷ, ಮಂಗಳ ವಾದ್ಯ, ಚೆಂಡೆ ವಾದನದೊಂದಿಗೆ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಆಗಮಿಸಿದ ಅತಿಥಿ ಗಣ್ಯರು ಮತ್ತು ಗುರು ಭಕ್ತರು ಶ್ರೀಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವಂದನೆ ಸಲ್ಲಿಸಿದರು. ಷಷ್ಟ್ಯಬ್ದಿಯ ಗೌರವಾರ್ಥವಾಗಿ ಪುಷ್ಪ ಪೇಟ, ಸಂಪಿಗೆಯ ಮಾಲೆ ಅರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಲಾಯಿತು. ಮಹಾರಾಷ್ಟ್ರದ ವಿಶೇಷ ಅತಿಥಿ ಗಣ್ಯರು ಮತ್ತು ಶ್ರೀಗಳ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗುರುಗಳು ಹಿಂದಿ ಭಾಷೆಯಲ್ಲಿಯೇ ನೆರೆದ ಗಣ್ಯರಿಗೆ ಆಶೀರ್ವಚನ ಮಾಡಿದರು.
ಗಣ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಗೌರವಾನ್ವಿತ ಕಂದಾಯ ಮಂತ್ರಿಗಳಾದ ಶ್ರೀ ರಾದಾಕೃಷ್ಣ ವಿಖೇ ಪಾಟೀಲ್, ಮುಂಬೈ ಈಶಾನ್ಯದ ಸಂಸದರಾಗಿರುವ ಶ್ರೀ ಮನೋಜ್ ಕೋಟಕ್, ಹಟ್ಕನಂಗಲೇ ಸಂಸದರಾಗಿರುವ ಧೈರ್ಯಶೀಲ್ ಸಂಭಾಜಿರಾವ್ ಮಾನೆ, ಅಹ್ಮದ್ ನಗರ್ ಸಂಸದರಾಗಿರುವ ಸುಜಯ್ ವಿಖೇ ಪಾಟೀಲ್, ಶಾಸಕರಾಗಿರುವ ಪ್ರಕಾಶ್ ಪಾತೆರ್ ಪೆಕರ್, ಜಿಲ್ಲಾಧಿಕಾರಿಗಳಾಗಿರುವ ಮನೋಜ್ ಗೋಹಾಡ್ ಮತ್ತು ರಾಜೇಶ್ ಕಾಟ್ಕರ್, ಮುಂಬೈ ಇಂಡಿಯನ್ಸ್ ನ ಐಪಿಎಲ್ ಆಟಗಾರ ಧವಲ್ ಕುಲಕರ್ಣಿ, ಸಾಯಿಬಾಬ ಸಂಸ್ಥಾನ್ ಟ್ರಸ್ಟ್ನ ಅಧ್ಯಕ್ಷರೂ, ಹಾರ್ವೆ ಬಿಲ್ಡರ್ಸ್ ಮಾಲಕರಾಗಿರುವ ಸುರೇಶ್ ಹಾರ್ವೆ, ಇಡಿ ಆಫೀಸರ್ ಆಗರುವ ಮಹೇಶ್ ಪಾಟೀಲ್, ಮುಂಬೈ ಸೈಬರ್ ಸೆಲ್ನ ಡಿಸಿಪಿಯಾಗಿರುವ ಡಾ| ರಶ್ಮಿ ಕರಂದಿಕರ್ ಐಪಿಎಸ್, ಅದಾನಿ ಬಿಲ್ಡರ್ಸ್ನ ಪ್ರಥ್ವೀ ಚೌಹಾಣ್, ಕಾರ್ಪೋರೇಟರ್ ಗಳಾಗಿರುವ ಶ್ರೀಕಲಾ ಪಿಳ್ಳೈ ಮತ್ತು ಸುಪ್ರದಾ, ಯು ಮುಂಬಾದ ಪ್ರೋ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ, ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿರುವ ಸಚಿನ ಮಾಸ್ಟರ್, ಮುಂಬೈನ ಪ್ರಖ್ಯಾತ ವೆಡ್ಡಿಂಗ್ ಪ್ಲಾನರ್ ರಶ್ಮಿ ಸೈಗಲ್, ಸಲ್ಮಾನ್ ಖಾನ್ ಮ್ಯಾನೇಜರ್ ಆಗಿರುವ ಶಮಿರಾ ಮುಂತಾದ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು.
ಮುಂದಿನ ಅಕ್ಟೋಬರ್ 19ನೇ ತಾರೀಕಿನಂದು ಮುಂಬೈ ಭಕ್ತ ಜನರ ಅಪೇಕ್ಷೆಯ ಮೇರೆಗೆ ಪೂಜ್ಯ ಶ್ರೀಗಳಿಗೆ ಸ್ವರ್ಣ ಮತ್ತು ರಜತ ತುಲಾಭಾರದೊಂದಿಗೆ ಇದೇ ಕ್ಷೇತ್ರದಲ್ಲಿ ಗುರುವಂದನಮ್ ಕಾರ್ಯಕ್ರಮ ನಡೆಸುವ ಬಗ್ಗೆ ಪ್ರಸ್ತಾಪಿಸಲಾಗಿ ಎಲ್ಲರೂ ಬಹಳ ಆನಂದದಿಂದ ಮತ್ತು ಗೌರವದಿಂದ ಕಾರ್ಯಕ್ರಮ ಯಶಸ್ವೀ ಮಾಡುವ ಬಗ್ಗೆ ಸಮ್ಮತಿಸಿದರು. ಗುರುಗಳು ಕಾರ್ಯಕ್ರಮದ ಸಂಯೋಜನೆಯನ್ನು ಕಂಡು ಬಹಳ ಖುಷಿಪಟ್ಟರು. ಆಗಮಿಸಿದ ಎಲ್ಲಾ ಸದ್ಭಕ್ತರಿಗೆ ವೈವಿಧ್ಯಮಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಂತ್ರಪ್ತಿಯಿಂದ ಸೇವಿಸಿ ಖುಷಿಪಟ್ಟರು. ಯೋಜಿತ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.