ಲೇಖನ:
” ಅನ್ನವಿಠ್ಠಲನ ಅಂಗಳದಲ್ಲಿ ಅಕ್ಕಿಮುಹೂರ್ತ:”
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ವಾಮನತೀರ್ಥ ಪರಂಪರೆಯ ಶ್ರೀ ಶೀರೂರುಮಠ ಮುಂದಿನ ಪರ್ಯಾಯದ ಹೊಸ್ತಿಲಲ್ಲಿದೆ.ಶ್ರೀ ವಾದಿರಾಜರ ಸತ್ಸಂಪ್ರದಾಯದಂತೆ ಕೃಷ್ಣ-ಪ್ರಾಣದೇವರ ಪೂಜಾದೀಕ್ಷೆಯ ಮುಂಚಿತ ನಡೆಯುವ ಅಕ್ಕಿಮುಹೂರ್ತದ ಸಡಗರ;ಸಂಭ್ರಮ.ಭಾವುಕ ಭಕ್ತರಿಗೊಂದು ಭಗವತ್ಪೂಜೆಯಲ್ಲಿ ಭಾಗವಹಿಸುವ ಪುಳಕ:ತವಕ.
ಮುಹೂರ್ತಗಳೆಂದರೆ ಪರ್ಯಾಯ ಪೂರ್ವ ತಯಾರಿಯ ಶುಭಾರಂಭ.ಎರಡು ವರ್ಷ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ನಡೆಯುವ ನಿತ್ಯೋತ್ಸವ-ಅನ್ನದಾನಾದಿಗಳ ಪೂರ್ವಭಾವಿ ಕಾರ್ಯಗಳ ಧಾರ್ಮಿಕ ಆಚರಣೆ.
ಜಗದೋದ್ಧಾರ ಶ್ರೀ ಕೃಷ್ಣ ದೇವರಿಗೆ ನಿತ್ಯವೂ ಹದಿನಾರು ಪೂಜೆಗಳು.ವಿವಿಧ ಭಕ್ಷ್ಯ ಭೋಜ್ಯ,ಅನ್ನದ ನೈವೇದ್ಯಗಳ ಸಮರ್ಪಣೆ.ಜೊತೆಗೆ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದದ ವಿತರಣೆ.ಈ ಹಿನ್ನೆಲೆಯಲ್ಲಿ ಆರಂಭವಾದ ಆಚರಣೆಯೇ ಬಾಳೆಮುಹೂರ್ತ,ಅಕ್ಕಿಮುಹೂರ್ತ, ಕಟ್ಟಿಗೆಮುಹೂರ್ತ ಹಾಗೂ ಭತ್ತಮುಹೂರ್ತಗಳು.ಇದೀಗ ಅಕ್ಕಿಮುಹೂರ್ತದ ಸರದಿ..
** ಅಕ್ಕಿಮುಹೂರ್ತದ ವೈಶಿಷ್ಟ್ಯ:
ಶ್ರೀ ಮದ್ವಾದಿರಾಜರ ಸತ್ಸಂಪ್ರದಾಯದಂತೆ ಸುಮಾರು ನಾಲ್ಕುನೂರು ವರ್ಷಗಳಿಂದ ಅಕ್ಕಿಮುಹೂರ್ತದ ಸಾಂಪ್ರದಾಯಿಕ ಆಚರಣೆ ನಡೆಯುತ್ತಿದೆ.ಯತಿಗಳಿಂದಲೇ ಪೂಜೆಗೊಳ್ಳುವ ಭಗವಂತನಿಗೆ ಯತಿಗಳಿಂದಲೇ ನೈವೇದ್ಯಾದಿಗಳ ಸಮರ್ಪಣೆ.ವಿವಿಧ ಭಕ್ಷ್ಯಗಳಿದ್ದರೂ ನೈವೇದ್ಯಗಳಲ್ಲಿ ‘ಅನ್ನ’ಕ್ಕೆ ಹೆಚ್ಚಿನ ಮಹತ್ವ. ಅಕ್ಕಿಯನ್ನು ಬೇಯಿಸಿ ಇಂಗಿಸಿದ ‘ ಉರುಳಿ ‘ಯೇ ಪ್ರಧಾನ ನೈವೇದ್ಯ. ನಿತ್ಯವೂ ನಡೆಯುವ ಹದಿನಾರು ಪೂಜೆಗಳಲ್ಲಿ ಪ್ರತೀ ಪೂಜೆಗೂ ಉರುಳಿಯ ಸಮರ್ಪಣೆ.ಕರಾವಳಿಯ ಈ ಮಣ್ಣಿನ ಎಲ್ಲಾ ಊಟೋಪಚಾರದಲ್ಲೂ ಅನ್ನವೇ ಪ್ರಮುಖ ಖಾದ್ಯ.ಅನ್ನ ಬ್ರಹ್ಮನೆಂಬ ಖ್ಯಾತಿಗಳಿಸಿದ ಉಡುಪಿ ಮಠದಲ್ಲೂ ಅನ್ನ ನೈವೇದ್ಯಕ್ಕೆ ವಿಶೇಷ ಸ್ಥಾನಮಾನ.
ಅಕ್ಕಿ ಸಾತ್ವಿಕತೆಯ ಪ್ರತೀಕ.ಅದಕ್ಕೆಂದೇ ಅನ್ನಕ್ಕೂ ಸಾತ್ವಿಕತೆ ಆಹಾರದ ಪಟ್ಟ.ದೇವತಾಕಾರ್ಯ,ಪಿತೃಕಾರ್ಯಗಳಲ್ಲೂ ಅಕ್ಕಿಗೆ ಮಹತ್ವದ ಸ್ಥಾನ. ಹಸಿವಿನ ತೃಷೆ ತೀರುವುದೂ ಅನ್ನದಿಂದಲೇ.ಅನ್ನದೇವರ ಮುಂದೆ ಇನ್ನು ದೇವರು ಉಂಟೇ..
** ಮುಷ್ಟಿ ಅಕ್ಕಿಯ ಸಮರ್ಪಣೆ:
ಪರ್ಯಾಯದ ಸುಮಾರು ಒಂಭತ್ತು ತಿಂಗಳ ಮುಂಚಿತವಾಗಿ ಅಕ್ಕಿಸಂಗ್ರಹ ಅಕ್ಕಿಮುಹೂರ್ತ ದಿಂದ ಶುಭಾರಂಭಗೊಳ್ಳುತ್ತದೆ.ಭಗವತ್ಪೂಜೆಯಲ್ಲಿ ಭಕ್ತಸಮೂಹಕ್ಕೂ ಅವಕಾಶ ಇರಬೇಕೆಂಬ ಶ್ರೀ ಮಠದ ಆಶಯದಂತೆ ಮುಷ್ಟಿ ಅಕ್ಕಿಸಮರ್ಪಣೆಯ ಸದಾವಕಾಶ.ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಅಕ್ಕಿಮುಡಿಯ ಜೊತೆಗೆ ಶ್ರೀ ಚಂದ್ರಮೌಳೀಶ್ವರ,ಅನಂತಾಸನ,ಶ್ರೀ ಕೃಷ್ಣ-ಮುಖ್ಯಪ್ರಾಣದೇವರಲ್ಲಿ ಪ್ರಾರ್ಥನೆ-ಮೆರವಣಿಗೆ.ಶ್ರೀ ಶೀರೂರು ಅನ್ನವಿಠ್ಠಲದೇವರ ಎದುರು ಮುಷ್ಟಿ ಅಕ್ಕಿಯ ಜೊತೆಗೆ ಅಕ್ಕಿಮುಡಿಯ ಸಮರ್ಪಣೆಯ ಅವಕಾಶ.ಭಕ್ತಜನರಿಗೆ ಭಗವಂತನಿಗೆ ಅರ್ಪಿಸುವ ಸುವಸ್ತುಗಳ ಸಮರ್ಪಣೆಯ ಭಾಗ್ಯ.ಹೂವಿನೊಂದಿಗೆ ಹೂವಿನ ದಾರವಾಗುವ ಸೌಭಾಗ್ಯ.ಭಕ್ತರು ಅರ್ಪಿಸಿದ ಮುಷ್ಟಿ ಅಕ್ಕಿಯಿಂದ ಮುಕ್ತಿ ಸಂಪನ್ನತೆಯ ಯೋಗ.ಸಾತ್ವಿಕ ಆಹಾರದಿಂದ ದೇಹ ಬುದ್ದಿ ಮನಸ್ಸುಗಳಿಗೂ ಸಾತ್ವಿಕ ಚಿಂತನೆಯ ಸಂಯೋಗ.ಬಾಳಲ್ಲಿ ಮೃಷ್ಟಾನ್ನ ಬೋಜನದ ಶುಭಸೂಚಕ.ಸರಳ ಸಾತ್ವಿಕಶಕ್ತಿಯ ಉದ್ದೀಪಕ.
ಶೀರೂರುಮಠದ ಪಟ್ಟದ ದೇವರು ಶ್ರೀ ವಿಠ್ಠಲ ದೇವರು. ಅನ್ನವಿಠ್ಠಲನೆಂದೇ ಪ್ರತೀತಿ;ಪ್ರಸಿದ್ಧಿ.ಅನ್ನವಿಠ್ಠಲನ ಪರ್ಯಾಯವೆಂದರೆ ಅನ್ನ ಸಮೃದ್ಧಿಯ ಪರ್ಯಾಯವೆಂದೇ ಜಗದ್ವಿಖ್ಯಾತಿ.ಈ ಹಿನ್ನೆಲೆಯಲ್ಲಿ ಅಕ್ಕಿಮುಹೂರ್ತ ಭಗವದನುಗ್ರಹದ ಭಕ್ತಿ ಭಗವತ್ಪೂಜೆಯಾಗಲಿ; ಭಗವತ್ಸಮರ್ಪಣೆಯ ಮುಕ್ತಿಪೂಜೆಯಾಗಲಿ..
✒️.ಅಶ್ವತ್ಥ ಭಾರದ್ವಾಜ್ ,
ಕಬ್ಬಿನಾಲೆ.
ಕನ್ನಡ ಉಪನ್ಯಾಸಕರು.