ಉಡುಪಿ: ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ನಿರ್ಲಕ್ಷ್ಯಿಸದೇ ವೈದ್ಯರನ್ನು ಸಂಪರ್ಕಿಸಿ. ಅವರು ನೀಡುವ ಸಲಹೆಗಳನ್ನು ಪಾಲಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್.ಎಸ್.ಗಂಗಣ್ಣನವರ್ ಕಿವಿಮಾತು ಹೇಳಿದರು.
ಅವರು ಶುಕ್ರವಾರ, ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಹಾಗು ಜಿಲ್ಲಾಸ್ಪತ್ರೆ ಅಜ್ಜರಕಾಡು ಇವರುಗಳ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ನ್ಯಾಯಧೀಶರುಗಳಿಗೆ, ಸಿಬ್ಬಂದಿಗಳಿಗೆ, ನ್ಯಾಯವಾದಿಗಳಿಗೆ ಹಾಗು ಕಕ್ಷಿದಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಮಾತನಾಡಿ, ಕರಾವಳಿಯ ವಾಸಿಗಳ ಆಹಾರ ಪದ್ದತಿ, ಜೀವನ ಶೈಲಿಯಿಂದ 20% ಗಿಂತಲೂ ಹೆಚ್ಚು ಜನರಲ್ಲಿ ಸಕ್ಕರೆ ಖಾಯಿಲೆ ಹಾಗು ರಕ್ತದೊತ್ತಡ ಖಾಯಿಲೆಗಳು ಜಾಸ್ತಿಯಾಗುತ್ತಿವೆ. ಆರೋಗ್ಯಕರ ಜೀವನಕ್ಕೆ ಮಾನವನಿಗೆ ವ್ಯಾಯಮವು ಅತೀ ಅಗತ್ಯವಾಗಿದೆ ಎಂದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗು ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ಪುರುಷೋತ್ತಮ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ವೈದ್ಯಾಧಿಕಾರಿಗಳಾದ ಡಾ.ಸ್ವಸ್ತಿಕ್, ಡಾ.ಮಾಣಿಕ್ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಶಾಂಭವಿ ಪ್ರಾರ್ಥಿಸಿದರು. ನಟರಾಜ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.