ಗರಡಿಯ ಸೇವಾವರ್ಗದವರಿಗೆ ಆತ್ಮವಿಶ್ವಾಸ ತುಂಬುವ ಸತ್ಕಾರ್ಯವಾಗಬೇಕು:
ತುಳುನಾಡ ಗರಡಿಗಳ ನಂಬಿಕೆ ಮತ್ತು ಸೇವಾ ಪರಂಪರೆ ಅವಿಚ್ಚಿನವಾದದ್ದು. ಹಿರಿಯರ ಕಾಲದಿಂದಲೂ ಸತ್ಯ ,ಶ್ರದ್ಧೆಯೊಂದಿಗೆ ಗುರುತಿಸಿಕೊಂಡಿರುವ ಅರ್ಚಕರು,ದರ್ಶನ ಪೂಜಾರಿ ಬಂಧುಗಳನ್ನು ಗುರುತಿಸುವ ಮತ್ತು ಅವರಿಗೆ ಆತ್ಮವಿಶ್ವಾಸ ತುಂಬುವ ಸತ್ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಬೈದಶ್ರೀ ಹಮ್ಮಿಕೊಂಡಿರು ಕಾರ್ಯಕ್ರಮ ಸಾರ್ಥಕವಾದದ್ದು ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಅಭಿಪ್ರಾಯಪಟ್ಟರು. ಶ್ರೀಯುತರು ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಜರಗಿದ ಉಡುಪಿ ತಾಲೂಕಿನ ಗರಡಿಗಳ ಪೂಪೂಜನೆಯವರು ಹಾಗೂ ದರ್ಶನ ಪೂಜಾರಿಯವರ ಸಮಾಲೋಚನೆ ಮತ್ತು ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಗರಡಿಯ ಸಮಗ್ರತೆಯ ಕುರಿತು ಅಧ್ಯಯನ ಮಾಡುತ್ತಾ, ಭವಿಷ್ಯಕ್ಕೆ ಪೂರಕವಾಗುವ ರೀತಿಯಲ್ಲಿ ಬೈದಶ್ರೀ ಸಂಸ್ಥೆ ಆರಂಭಗೊಂಡಂದಿನಿಂದಲೂ ಸಾಕಷ್ಟು ಮಾದರಿ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಮುಂದಿನ ದಿನಗಳಲ್ಲಿ ಅವಿಭಜಿತ ಜಿಲ್ಲಾ ಮಟ್ಟದಲ್ಲಿ ಇದೇ ಮಾದರಿಯ ಕಾರ್ಯಕ್ರಮ ಜರಗಿ ಮುಂದೆ ಸಮಸ್ತ ಗರಡಿ ಚಾಕರಿಯವರ ಸಮಾವೇಶ ಜರಗುವಂತಾಗಲಿ. ಈ ಸಮಾವೇಶ ಗರಡಿಯ ಬಹುತೇಕ ಬೇಡಿಕೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ವೇದಿಕೆಯಾಗಲಿ. ಈ ಅರ್ಥಪೂರ್ಣ ವಿಚಾರದಲ್ಲಿ ನಾನೂ ಸಕ್ರೀಯವಾಗಿ ಸಹಕರಿಸುತ್ತೇನೆ ಮತ್ತು ಸರ್ಕಾರಿ ಮಟ್ಟದ ಸೌಲಭ್ಯಗಳಿಗೆ ಅಗತ್ಯವಾಗಿ ಸ್ಪಂದಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಸೂರ್ಯೋದಯ್ ಪೆರಂಪಳ್ಳಿ ಮಾತನ್ನಾಡಿ, ಗರಡಿಯ ಐತಿಹ್ಯ ಉಳಿಸಿ ಬೆಳೆಸುವಲ್ಲಿ ಸೇವಾವರ್ಗದವರ ಸತ್ಪಾತ್ರ ಸದಾ ಸ್ಮರಣೀಯವಾದುದು. ಅವರೆಲ್ಲರನ್ನು ಗುರುತಿಸುವುದು ಬೈದಶ್ರೀಯ ಭಾಗ್ಯ ಮತ್ತು ಪುಣ್ಯಪ್ರದ ಸಂಗತಿ. ಗರಡಿ ಆರಾಧನಾ ವಿಧಾನವು ವೈದಿಕ ಪ್ರಭಾವಕ್ಕೆ ಒಳಗಾಗದೆ ಮೂಲ ಸಂಪ್ರದಾಯ,ಪರಂಪರೆಯೇ ಅನುಕರಣೆಯಾಗಲಿ ಎಂದರು.
ಉಡುಪಿ ತಾಲ್ಲೂಕು ವ್ಯಾಪ್ತಿಯ 22 ಗರಡಿಯ ಪೂ ಪೂಜನೆಯವರು ಹಾಗೂ ದರ್ಶನ ಪೂಜಾರಿಯವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೈದಶ್ರೀ ಹುಟ್ಟು ಬೆಳವಣಿಗೆಯ ಕುರಿತಾದ ಉದಯ ಮತ್ತು ವಿಕಾಸ ಫಲಕವನ್ನು ಅನಾವರಣಗೊಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಾಂಗಾಳ ಗುಡ್ಡೆ ಗರೋಡಿ ಸುಧಾಕರ ಡಿ ಅಮೀನ್ ಮಾತನ್ನಾಡಿ ಕೋಟಿ ಚೆನ್ನಯರ ಸತ್ಯದ ನಡೆನುಡಿಯ ಪಾಲನೆಯಾಗುವಲ್ಲಿ ಗರಡಿಯ ಪಾತ್ರ ಮಹತ್ವದ್ದಾಗಿದೆ. ಆಧುನಿಕ ದಿನಮಾನದಲ್ಲಿ ಗರಡಿಯ ಪ್ರತಿಯೊಂದು ಚಟುವಟಿಕೆಯು ಗುರುಹಿರಿಯರ ಸಂಸ್ಕೃತಿ ಪ್ರಧಾನವಾಗಿಯೇ ಮುಂದುವರಿಯಬೇಕೆಂದು ಆಶಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಿನ್ನಿಮೂಲ್ಕಿ ಗರಡಿಯ ಭಾಸ್ಕರ ಸುವರ್ಣ ಹಿರಿಯರ ಮಾರ್ಗದರ್ಶನದೊಂದಿಗೆ ಯುವಜನತೆ ಭಕ್ತಿ ಶ್ರದ್ಧೆಯಿಂದ ಗರಡಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕೆಂದರು. ಅಂಜಾರು ಗರಡಿಯ ಸುಂದರ ಪೂಜಾರಿ ಗರಡಿಯ ಶಿಷ್ಟಾಚಾರ ಪಾಲನೆಯಲ್ಲಿ ವ್ಯತ್ಯಾಸಗಳಾಗಬಾರದೆಂದು ತಿಳಿಸಿದರು. ಪಕ್ಕಿಬೆಟ್ಟು ಗರಡಿಯ ಮೋಹನ ಪೂಜಾರಿ ವಿಶಿಷ್ಟವಾದ ಹಿನ್ನೆಲೆಯಿರುವ ಗರಡಿ ಆರಾಧನಾ ಕ್ರಮಗಳು ಆದ್ಯತೆಯಿಂದ ಮತ್ತು ಬದ್ದತೆಯಿಂದ ನಡೆಯಬೇಕೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಬೈದಶ್ರೀ ಸಂಸ್ಥೆ ರೂಪುಗೊಳಿಸಿದ ‘ಕೋಟಿ ಚೆನ್ನಯ ಸುಪ್ರಭಾತ’ ವನ್ನು ಲೋಕಾರ್ಪಣೆಗೊಳಿಸಲಾಯಿತು. ಸುಪ್ರಭಾತ ರಚನೆಯಲ್ಲೋರ್ವರಾದ,ಬೈದಶ್ರೀ ಗೌರವಾಧ್ಯಕ್ಷರಾದ ದಾಮೋದರ ಕಲ್ಮಾಡಿ ಸುಪ್ರಭಾತದ ಕುರಿತು ವಿವರ ನೀಡಿದರು.
ಗರಡಿಯ ಸೇವಾವರ್ಗದವರಿಗೆ ಮಾಸಿಕ ವೇತನ ನೀಡಬೇಕೆನ್ನುವ ಕುರಿತಾದ ಬೈದಶ್ರೀಯ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ವಿನಯ ಕುಮಾರ್ ಸೊರಕೆಯವರ ಮುಖಾಂತರ ನೀಡಲಾಯಿತು.
ಬೈದಶ್ರೀ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಎಂಕೆ ಸ್ವಾಗತಿಸಿ,ಪ್ರಸ್ತಾವಿಸಿದರು. ಉಗ್ಗೆಲ್ಬೆಟ್ಟು ಗರಡಿ ಅಧ್ಯಕ್ಷರಾದ ದಯಾನಂದ ಕರ್ಕೇರ ಸಮಾಲೋಚನೆಯ ಸಮನ್ವಯಕಾರರಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಬೈದಶ್ರೀ ಕೋಶಾಧಿಕಾರಿ ಮಹೇಶ್ ಎಸ್ ಸುವರ್ಣ ಧನ್ಯವಾದ ಸಲ್ಲಿಸಿದರು.

















by