*ವನಮಹೋತ್ಸವ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ*
ಪರ್ಕಳ, ಜು. 18: ರೋಟರಿ ಐಸಿರಿ ಪರ್ಕಳ ಹಾಗೂ ಅದರ ಸಮುದಾಯ ಘಟಕ ಆರ್‌ಸಿಸಿ ಐಸಿರಿ ವತಿಯಿಂದ ಶನಿವಾರ ಪರಿಸರ ಸಂರಕ್ಷಣೆ ಮತ್ತು ಸಮಾಜಸೇವೆಗೆ ಒತ್ತು ನೀಡುವ ವನಮಹೋತ್ಸವ ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಅಗತ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಗಳು ನಡೆಯಿತು.
ಪರ್ಕಳ ಸಮೀಪದ ಕಬ್ಯಾಡಿಯ ಪ್ರಭಾವನ ಬಳಿಯ ಐಸಿರಿ ಸಸ್ಯವನದಲ್ಲಿ ನಡೆದ ವನಮಹೋತ್ಸವದಲ್ಲಿ ನೆರಳಿನ ಆಶ್ರಯ ನೀಡುವ ವಿವಿಧ ತಳಿಯ, ಉತ್ತಮ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಕ್ರೀಡಾ ಸಂಯೋಜಕ ರೊ. ಅಶೋಕ್ ನಾಯಕ್ ಅವರು ಸೀಡ್ ಬಾಲ್ಸ್‌ಗಳ ತಯಾರಿಕೆ, ಬಳಕೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು.
ರೋಟರಿ ಐಸಿರಿಯ ಸ್ಥಾಪಕ ಅಧ್ಯಕ್ಷ ಹಾಗೂ ಸಮುದಾಯಸೇವಾ ನಿರ್ದೇಶಕ ರೊ. ಪ್ರಭಾಕರ ಶೆಟ್ಟಿ ಕೆ. ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗಾಗಿ ಹಸಿರು ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸಬೇಕೆಂದರು.
ಬಳಿಕ ಸ್ಥಳೀಯ ಅಂಗನವಾಡಿಯ ಪುಟಾಣಿ ಮಕ್ಕಳಿಗೆ ಸಮವಸ್ತ್ರ, ನೋಟ್‌ಪುಸ್ತಕ, ವಿವಿಧ ಸ್ಟೇಷನರಿ ಸಾಮಗ್ರಿ ಹಾಗೂ ಕುಳಿತುಕೊಳ್ಳಲು ಟೇಬಲ್‌ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ರೊ. ಮಂಜುನಾಥ ಉಪಾಧ್ಯ ಅವರು ಶಿಕ್ಷಣ, ಮಕ್ಕಳ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗಣ್ಯರು ರೊ. ಪ್ರಭಾಕರ ಶೆಟ್ಟಿ ಕೆ. ಅವರು ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮಗಳಲ್ಲಿ ರೋಟರಿ ಐಸಿರಿ ಅಧ್ಯಕ್ಷ ರೊ. ಸಂದೀಪ್ ಕುಮಾರ್, ಸಮುದಾಯದಳ ಸಂಯೋಜಕ ರೊ. ಸುಕೇಶ್ ಕುಂದರ್, ಕ್ರೀಡಾ ಸಂಯೋಜಕ ರೊ. ಅಶೋಕ್ ನಾಯಕ್, ರೋಟರಿ ಐಸಿರಿ ಕಾರ್ಯದರ್ಶಿ ರೊ. ರಾಜೇಶ್ ಡಿ. ಶೆಣೈ, ಆರ್‌ಸಿಸಿ ಐಸಿರಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ನಾಯ್ಕ್, ಕಾರ್ಯದರ್ಶಿ ಶ್ರೀಮತಿ ಶಾರದಾ ಎಸ್., ಅಂಗನವಾಡಿ ಸೂಪರ್ವೈಸರ್ ಶ್ರೀಮತಿ ಶೈಲಾ, ಶಿಕ್ಷಕಿ ಶ್ರೀಮತಿ ಭಾರತಿ, ಸಹಾಯಕಿ ಶ್ರೀಮತಿ ಜ್ಯೋತಿ, ಸದಸ್ಯರು, ಪೋಷಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.


















by